ವೈಕುಂಠ ಏಕಾದಶಿ ಪ್ರಯುಕ್ತ ದಿನಾಂಕ 09/01/2025ರಂದು ಶ್ರೀ ಶ್ರೀನಿವಾಸ ಕಲ್ಯಾಣ ರಥೋತ್ಸವ ಹಾಗೂ ದಿನಾಂಕ 10/01/2025ರಂದು ಶ್ರೀನಿವಾಸ ದೇವರಿಗೆ ಸಹಸ್ರ ತುಳಸಿ ಅರ್ಚನೆ ಹಾಗೂ ವೈಕುಂಠ ದ್ವಾರ ಉದ್ಘಾಟನೆ ಮಾಡಲಾಗುವುದು.
|| ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ||
ದುರ್ವಾಸ ಕ್ಷೇತ್ರವಾದ, ತುಂಗಾ ತೀರದಲ್ಲಿ ಇರುವ ಶ್ರೀ ಸಾಲಿಗ್ರಾಮ ಶಿಲಾಮಯ ಶ್ರೀನಿವಾಸ ದೇವರು ( ನೇಪಾಳ ದಂಡಕಿ ನದಿಯ – ಹತ್ತು ಸಾವಿರ ವರ್ಷದ ಶಿಲೆ) ಹಾಗೂ ಮುಖ್ಯಪ್ರಾಣ ದೇವರು – ಶ್ರೀ ಗುರು ಸಾರ್ವಭೌಮರ ಶ್ರೀ ರಾಘವೇಂದ್ರ ಮೃತಿಕಾ ವೃಂದಾವನದ ಪ್ರತಿಷ್ಠಾಪನೆಯನ್ನು ಮಾಡಬೇಕೆಂಬ ಕನಸನ್ನು ಮಹಾ ಪ್ರಯತ್ನಪೂರ್ವಕವಾಗಿ ಲೋಕಕಲ್ಯಾಣಕ್ಕಾಗಿ ಈ ಮಹತ್ಕಾರ್ಯವನ್ನು ನನಸು ಮಾಡಿದ ವೈಕುಂಠ ವಾಸಿಗಳಾದ ಪಲ್ಲಕ್ಕಿ ಪ.ರಾ. ಶ್ರೀನಿವಾಸ್ ಅವರು ಈ ಮಠದ ನಿರ್ಮಾಣವನ್ನು ಮಾಡಿಸಿ ತಮ್ಮ ಸಕ್ಕರ್ಮಗಳಿಂದ ಬಡಬಗ್ಗರ, ದುಃಖಿತರ, ವಿಶೇಷವಾಗಿ ಕನ್ನಡಿಗರ ಸೇವೆ ಹಾಗೂ ದೇಶ ಸೇವೆಯ ಜೊತೆಗೆ ಈಶ ಸೇವೆಯನ್ನು ಮಾಡಿ ಅಜರಾಮರವಾಗಿರುವವರು.
ಪ.ರಾ. ಶ್ರೀನಿವಾಸ್
ಆನಂತರ ಪಲ್ಲಕ್ಕಿಯ ಎಲ್ಲಾ ಪರಿವಾರದವರು ಮಾತೃಶ್ರೀ ಸರೋಜಾಬಾಯಿ ಪಲ್ಲಕ್ಕಿ ಇವರ ಅಧ್ಯಕ್ಷತೆಯಲ್ಲಿ “ಪಲ್ಲಕ್ಕಿ ವೆಂಕಟಕೃಷ್ಣರಾಜ ಪ್ರತಿಷ್ಠಾನ” ಎಂಬ ಹೆಸರಿನಿಂದ ದಿನಾಂಕ 20/05/2013ರ ಶಕೆ., ಸಂವತ್ಸರ – ವೈಶಾಖ ಶುದ್ಧ ದಶಮಿಯಂದು ಶ್ರೀ ಶ್ರೀನಿವಾಸ ಪದ್ಮಾವತಿ ದೇವಿಯವರ ವಿವಾಹ ಮಹೋತ್ಸವದ ಪರ್ವಕಾಲದಂದು – ಶ್ರೀಮದ್ ಉತ್ತರಾದಿ ಮಠಾಧೀಶರಾದ ಪರಮಪೂಜ್ಯ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ, ಅವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶರಾದ ಶ್ರೀ 1008 ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರ ಪಾವನ ಉಪಸ್ಥಿತಿಯಲ್ಲಿ ಸಾಲಿಗ್ರಾಮ ಶಿಲಾಮಯ ಶ್ರೀ ಶ್ರೀನಿವಾಸ ದೇವರು, ಮುಖ್ಯ ಪ್ರಾಣ ದೇವರು ಹಾಗೂ ರಾಘವೇಂದ್ರ ಗುರುಸಾರ್ವಭೌಮರ ಮೃತಿಕಾ ವೃಂದಾವನದ ಸ್ಥಾಪನೆಯೂ ಶಾಸ್ತ್ರೋಕ್ತವಾಗಿ ಪಂ. ಸತ್ಯಸಂದಾಚಾರ್ಯ ಕಟ್ಟಿ ರವರ ಪೌರೋಹಿತ್ಯದಲ್ಲಿ ಅತ್ಯಂತ ವೈಭವಪೂರ್ವಕವಾಗಿ ನೆರವೇರಿತು.